ಚಾಮ್ ಜನ-
	ಪ್ರಾಚೀನ ಚಂಪಾರಾಜ್ಯದ ಸುಸಂಸ್ಕøತ ಜನ. ಆಸ್ಟ್ರೊನೇಷಿಯನ್ ಬುಡಕಟ್ಟಿಗೆ ಸೇರಿದವರು. ಪ್ರಾಚೀನ ಚಂಪಾರಾಜ್ಯ ಟಾಂ ಕಿನ್ ಮತ್ತು ಕೊಚಿನ್ ಚೈನಾಗಳನ್ನು ಬಿಟ್ಟು ಈಗಿನ ಅನ್ನಾಂ ಪ್ರಾಂತ್ಯವನ್ನು ಒಳಗೊಂಡು 180 ರಿಂದ 100 ವರೆಗೆ ವಿಷುವದ್ವøತ್ತವನ್ನು ವ್ಯಾಪಿಸಿಕೊಂಡಿದ್ದಿತ್ತು. ಹಿಂದು ವಸಾಹತು ರಾಜ್ಯವಾದ ಚಂಪಾದಿಂದಲೇ ಈ ಜನಕ್ಕೆ ಚಾಮ್ ಜನ, ಚಾಮರು ಎಂಬ ಹೆಸರು ಬಂತು. ಹಿಂದುಗಳ ಸಂಪರ್ಕ ಬೆಳಸುವ ಮುನ್ನ ಇವರನ್ನು ಯಾವ ಹೆಸರಿನಿಂದ ಕರೆಯುತ್ತಿದ್ದರೆಂಬುದು ತಿಳಿದುಬಂದಿಲ್ಲ. ಅಸಂಸ್ಕøತರಾದ ಇತರರನ್ನು ಈ ಜನ ಕಿರಾತ ಮುಂತಾದ ಹೆಸರಿನಿಂದ ಕರೆಯುತ್ತಿದ್ದರು. ಕ್ರಿ.ಶ. ಮೊದಲ ಶತಮಾನದಲ್ಲೇ ಚಾಮರು ಉತ್ತರದಲ್ಲಿ ಕ್ವ್ಯಾಂಗ್ ನಾಮ್‍ವರೆಗೂ ತಮ್ಮ ದಕ್ಷ ಆಧಿಪತ್ಯವನ್ನು ಸ್ಥಾಪಿಸಿದ್ದರು. ಅಲ್ಲದೆ ಚೀನದ ದಕ್ಷಿಣ ಗಡಿಯನ್ನು ಒಂದೇ ಸಮನೆ ಪೀಡಿಸುತ್ತಿದ್ದು, ಚೀನದ ದಾಸ್ಯಕ್ಕೊಳಗಾದ ತಮ್ಮ ಬುಡಕಟ್ಟಿನ ಜನರ ನೆರವು ಹಾಗೂ ಸಹಾನುಭೂತಿಯನ್ನು ಪಡೆಯುತ್ತಿದ್ದರು. ಕ್ರಿ.ಶ. ಸುಮಾರು 100ರಲ್ಲಿ ಸಿಯಾಂಗ್ ಲಿನ್ ಪಟ್ಟಣವಾಸಿಗಳಾದ ಚಾಮ್ ಜನ ಚೀನೀ ಅಧಿಕಾರಿಗಳಿಗೆ ಎದುರುಬಿದ್ದು ಬಹಿರಂಗ ಬಂಡಾಯ ಹೂಡಿ, ಚೀನದ ಸ್ವಾಧೀನದಲ್ಲಿದ್ದ ತಮ್ಮ ದೇಶದ ಉತ್ತರಭಾಗವನ್ನು ಆಕ್ರಮಿಸಿ ಚೀನಿ ಅಧಿಕಾರಿಗಳನ್ನು ಕೊಂದು ಅನೇಕ ಹಳ್ಳಿಗಳನ್ನು ನಾಶಪಡಿಸಿದರು. ಆದರೆ ಚೀನೀ ಸೈನಿಕರ ಕೈ ಮೇಲಾದ್ದರಿಂದ ಹಿಮ್ಮೆಟ್ಟಿದರು. ಕ್ರಿ.ಶ. 137ರಲ್ಲಿ ಸುಮಾರು ಹತ್ತು ಸಾವಿರ ಚಾಮರು ಚೀನದ ದಕ್ಷಿಣ ಪ್ರಾಂತದ ಕೆಲವು ಜಿಲ್ಲೆಗಳ ಮೇಲೆ ದಾಳಿ ನಡೆಸಿ ಅನೇಕ ಕೋಟೆಗಳನ್ನು ನಾಶಪಡಿಸಿ, ಆ ಪ್ರಾಂತ್ಯವನ್ನು ಕೊಳ್ಳೆಹೊಡೆದರು. ಕಾಲಾನುಕ್ರಮದಲ್ಲಿ ಗರಿಗಟ್ಟಿಕೊಂಡು ಸುಮಾರು ಕ್ರಿ.ಶ. 192ರಲ್ಲಿ ಸಿಯಾಂಗ್ ಲಿನ್ ವಾಸಿಯಾದ ಕ್ಯೂ ಲಿನ್ ಎಂಬಾತ ನಗರದ ಆಧಿಪತ್ಯವನ್ನು ವಹಿಸಿದ್ದ ಚೀನೀ ಅಧಿಕಾರಿಯನ್ನು ಕೊಂದು ತಾನೇ ರಾಜನೆಂದು ಸಾರಿದ. ಕ್ವ್ಯೆಂಗ್ ನಾಮ್‍ಗೆ ಸಮೀಪವಾಗಿ ದಕ್ಷಿಣದಲ್ಲಿರುವ ಟ್ರಾಕ್ಯು ನಗರವನ್ನೇ ಚೀನೀಯರು ಸಿಯಾನ್ ಲಿನ್ ಎಂದೂ ಚಾಮರು ಚಂಪಾ ನಗರೀ ಚಂಪಾಪುರ ಹಾಗೂ ಚಂಪಾ ಎಂದೂ ಕರೆಯುತ್ತಿದ್ದರು. ಹೀಗೆ ಮೊದಲು ಬಾರಿಗೆ ಕ್ವ್ಯಾಂಗ್ ನಾಮ್ ಪ್ರದೇಶದಲ್ಲಿ ಚಾಮರು ತಮ್ಮ ರಾಜ್ಯವನ್ನೇ ಸ್ಥಾಪಿಸಿದರೆಂದು ತಿಳಿದುಬರುತ್ತದೆ. ಈ ಪ್ರಾಂತ್ಯದಲ್ಲಿರುವ ಭವ್ಯ ಹಾಗೂ ಸುಂದರವಾದ ಮಿಸೋನ್ ಮತ್ತು ಡಾಂಗ್-ಡುಆಂಗ್ ದೇವಾಲಯಗಳ ಶ್ರೇಣಿಯೇ ಚಾಮರು ಸ್ಥಾಪಿಸಿದ ಚಂಪಾರಾಜ್ಯದ ಪ್ರತೀಕಗಳಾಗಿವೆ. ಭಾರತೀಯ ಸಂಪರ್ಕದಿಂದ ಉತ್ತೇಜಿತರಾಗಿ, ಚೀನೀ ಪ್ರಾಂತ್ಯಗಳಲ್ಲಿ ಜಯಶಾಲಿ ಆಕ್ರಮಣವನ್ನು ನಡೆಸಿ ಶಕ್ತಿಯುತವಾದ ರಾಜ್ಯವನ್ನು ಸ್ಥಾಪಿಸಿದ ಚಾಮರು ಕ್ರಿ.ಶ. 2ನೆಯ ಶತಮಾನದಲ್ಲೇ ಸತ್ತ್ವಶಾಲಿ ಜನಾಂಗವಾಗಿದ್ದರೆಂದು ವಿದಿತವಾಗುತ್ತದೆ. ಅಂದಿನಿಂದ ಕ್ರಿ.ಶ. 15ನೆಯ ಶತಮಾನದವರೆಗೆ ಇವರು ದೇಶದ ರಾಜಕೀಯ ಚರಿತ್ರೆಯಲ್ಲಿ ಸ್ಪಷ್ಟವಾದ ತಮ್ಮದೇ ಆದ ಯಾವ ಪಾತ್ರವನ್ನೂ ವಹಿಸಿದಂತೆ ಕಾಣುವುದಿಲ್ಲ. ಇವರು ಭಾರತದ ಸಂಪ್ರದಾಯ, ರೀತಿನೀತಿ, ಭಾಷೆ ಹಾಗೂ ಮತೀಯ ಧರ್ಮಗಳನ್ನು ಪರಿಗ್ರಹಿಸಿ, ಭಾರತದ ಮೂಲಭೂತ ಅಂಶಗಳೊಡನೆ ಬೆರೆತು ತಮ್ಮ ಎರಡೂ ವರ್ಗಗಳೊಳಗೆ ಸಂಪೂರ್ಣ ಹಾಗೂ ಸಮಗ್ರವಾದ ಸಾಂಸ್ಕøತಿಕ ಕೊಡುಕೊಳಿಯನ್ನು ಸಾಧಿಸಿದರು.
(ಎಸ್.ವಿ.ಎಸ್.ಬಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ